Spread the love

ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯದಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯೊಂದನ್ನು ನಗರಸಭೆಯ ಪೌರಕಾರ್ಮಿಕರು ಸುರಕ್ಷಿತವಾಗಿ ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕಸದ ವಿಲೇವಾರಿ ವೇಳೆ ಸಿಕ್ಕ ಬೆಲೆಬಾಳುವ ಚಿನ್ನಾಭರಣವನ್ನು ಮರಳಿಸಿದ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆಯ ವಿವರ: ದೀಪಾವಳಿ ಹಬ್ಬದ ಪೂಜೆಯ ಬಳಿಕ ಕಳಸವಾಡ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಕವಿತಾ ಗಣೇಶ್ ನಾಯ್ಕ್ ಎಂಬುವರು ಕಣ್ತಪ್ಪಿನಿಂದ ತ್ಯಾಜ್ಯದ ಕವರ್‌ನೊಂದಿಗೆ ತಮ್ಮ ಚಿನ್ನದ ಕಿವಿಯೋಲೆಯನ್ನೂ ಕಸಕ್ಕೆ ಹಾಕಿದ್ದರು. ಈ ಕಸವನ್ನು ವಾಹನದಲ್ಲಿ ತುಂಬಿಕೊಂಡು ಹೋಗಿದ್ದ ಸಿಬ್ಬಂದಿ, ವಿಲೇವಾರಿ ಘಟಕದ ನೆಲಭರ್ತಿ (Landfill/Segregation) ಜಾಗದಲ್ಲಿ ಕಸವನ್ನು ಬೇರ್ಪಡಿಸುತ್ತಿದ್ದರು.

ಈ ವೇಳೆ ಮನೆ ಮನೆ ಕಸ ಸಂಗ್ರಹಣೆ ವಾಹನದ ಚಾಲಕ ಅರುಣ್ ವಿಠಲ್ ಹರಿಜನ್ ಹಾಗೂ ಸಹಾಯಕ ಮದನ್ ನಾಯ್ಕ ಅವರಿಗೆ ಕಸದ ರಾಶಿಯಲ್ಲಿ ಚಿನ್ನದ ಓಲೆ ಸಿಕ್ಕಿದೆ. ಕೂಡಲೇ ಅದನ್ನು ಗಮನಿಸಿ ಭದ್ರವಾಗಿ ತೆಗೆದಿಟ್ಟುಕೊಂಡ ಇಬ್ಬರೂ, ಆ ಓಲೆ ಯಾರದ್ದು ಎಂದು ವಿಚಾರಿಸಿದ್ದಾರೆ. ಬಳಿಕ ಓಲೆ ಕಳೆದುಕೊಂಡು ಕಂಗಾಲಾಗಿದ್ದ ವಾರಸುದಾರೆ ಕವಿತಾ ಗಣೇಶ್ ನಾಯ್ಕ ಅವರ ಬಗ್ಗೆ ಮಾಹಿತಿ ಪಡೆದು, ಖುದ್ದಾಗಿ ಅವರನ್ನು ಸಂಪರ್ಕಿಸಿ ಚಿನ್ನದ ಓಲೆಯನ್ನು ಸುರಕ್ಷಿತವಾಗಿ ಹಿಂದಿರುಗಿಸಿದ್ದಾರೆ.

ಕಳೆದುಹೋಗಿದ್ದ ಚಿನ್ನದ ಓಲೆ ಮರಳಿ ಸಿಕ್ಕಿದ್ದರಿಂದ ನಿರಾಳರಾದ ಕವಿತಾ ಅವರು ಸಿಬ್ಬಂದಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಯಾವುದೇ ಆಸೆ, ಆಮಿಷಕ್ಕೊಳಗಾಗದೆ ಪ್ರಾಮಾಣಿಕವಾಗಿ ಚಿನ್ನದ ಓಲೆಯನ್ನು ವಾಪಸ್ ನೀಡಿದ ವಾಹನ ಚಾಲಕ ಅರುಣ್ ವಿಠಲ್ ಹರಿಜನ್ ಹಾಗೂ ಸಹಾಯಕ ಮದನ್ ನಾಯ್ಕ್ ಅವರ ಆದರ್ಶ ಕಾರ್ಯವನ್ನು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *