ಹೊನ್ನಾವರ: ಪರಿಸರ ಮತ್ತು ಜೀವವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಪಶ್ಚಿಮ ಘಟ್ಟಗಳ ಉಳಿವಿಕೆಗಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ. ಈ ಪರಿಸರ ಸಂರಕ್ಷಣೆಯ ಕಾಳಜಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಹೊನ್ನಾವರ ತಾಲೂಕಿನ ಪ್ರಸಿದ್ಧ ಬಂಗಾರಮಕ್ಕಿ ಮಹಾಸಂಸ್ಥಾನದ ಮಾರುತಿ ಗುರೂಜಿ ಅವರು ‘ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ’ ವ್ರತವನ್ನು ಕೈಗೊಳ್ಳುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.
ಜುಲೈ 29ರಂದು ಆರಂಭವಾಗಿರುವ ಈ ವಿಶಿಷ್ಟ ಚಾತುರ್ಮಾಸ್ಯವು ಸೆಪ್ಟೆಂಬರ್ 26ರವರೆಗೆ ನಡೆಯಲಿದ್ದು, ದೇವಸ್ಥಾನದ ಆವರಣದಲ್ಲಿ ಪ್ರತಿದಿನ ನಡೆಯುವ ವಿಚಾರ ಸಂಕಿರಣಗಳಲ್ಲಿ ರಾಜ್ಯದ ಪ್ರಸಿದ್ಧ ವಿಜ್ಞಾನಿಗಳು ಹಾಗೂ ಪರಿಸರವಾದಿಗಳು ಪಾಲ್ಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪರಿಸರ ಕಾಳಜಿಯ ಚರ್ಚೆಗಳಲ್ಲಿ ತೀವ್ರ ಕಳವಳ ಮೂಡಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಸರ್ಕಾರವು ದಬ್ಬಾಳಿಕೆಯಿಂದ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿರುವ ಮಾರುತಿ ಗುರೂಜಿ, ಈ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಆಗುವ ಹಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ತಮ್ಮ ಈ ಎರಡು ತಿಂಗಳ ಚಾತುರ್ಮಾಸ್ಯ ವ್ರತದ ಸಂಪೂರ್ಣ ವಿಷಯವಸ್ತುವನ್ನು ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿಯೇ ಮೀಸಲಿಟ್ಟಿರುವುದು ಈ ಹೋರಾಟದ ತೀವ್ರತೆಯನ್ನು ತೋರಿಸುತ್ತದೆ.
ಪಶ್ಚಿಮ ಘಟ್ಟಗಳ ನಾಶದಿಂದ ಮುಂದೊಂದು ದಿನ ಪ್ರಾಣಿ ಸಂಕುಲ, ನದಿಮೂಲಗಳು ಹಾಗೂ ಅಪಾರ ಅರಣ್ಯ ಸಂಪತ್ತಿಗೆ ಭಾರಿ ಹಾನಿಯಾಗಿ ಬಹುದೊಡ್ಡ ಪ್ರಾಕೃತಿಕ ವಿಕೋಪ ಎದುರಾಗಲಿದೆ ಎಂಬ ಆತಂಕವನ್ನು ಜನರಿಗೆ ತಲುಪಿಸಲು ಅವರು ಈ ಮಾರ್ಗವನ್ನು ಆಯ್ದುಕೊಂಡಿದ್ದಾರೆ.
