ಹೊನ್ನಾವರ: ಪಟ್ಟಣದ ನಂಬರ್ 1 ಶಾಲೆಯ ಮುಖ್ಯ ಶಿಕ್ಷಕಿ ಉಷಾ ನಾಯಕ ಅವರು 2026ನೇ ಸಾಲಿನ ಪ್ರತಿಷ್ಠಿತ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೋರಿದ ವಿಶೇಷ ಕಾಳಜಿ ಮತ್ತು ತಾವು ಸೇವೆ ಸಲ್ಲಿಸಿದ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಇವರನ್ನು ಈ ಮಹತ್ವದ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶನಿವಾರ ಸೆ.5 ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ ಅವರು ಈ ಅತ್ಯುನ್ನತ ಗೌರವವನ್ನು ಸ್ವೀಕರಿಸಲಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು
ಟಿಸಿಎಚ್, ಬಿಎಡ್ ಹಾಗೂ ಎಂ.ಎ ಪದವೀಧರೆಯಾಗಿರುವ ಉಷಾ ನಾಯಕ ಅವರು 1989ರಲ್ಲಿ ಮಂಡ್ಯದ ಹರಳಹಳ್ಳಿಯ ಏಕೋಪಾಧ್ಯಾಯ ಶಾಲೆಯ ಮೂಲಕ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು. ಬಳಿಕ 1997ರಲ್ಲಿ ಹೊನ್ನಾವರ ತಾಲೂಕಿನ ಚಂದ್ರಾಣಿ ಶಾಲೆಗೆ ವರ್ಗಾವಣೆಗೊಂಡ ಅವರು, ದಾನಿಗಳ ನೆರವಿನಿಂದ ಶೌಚಾಲಯ, ರಂಗಮಂದಿರ ನಿರ್ಮಾಣ ಹಾಗೂ ಉಚಿತ ನೋಟ್‌ಬುಕ್ ವಿತರಣೆಯಂತಹ ಜನಪರ ಕಾರ್ಯಗಳ ಮೂಲಕ ಗಮನ ಸೆಳೆದರು.
ಕರ್ಕಿಯ ತೊಪ್ಪಲಕೇರಿ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಶಾಲೆಯನ್ನು ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಿದರು. ವಂದೂರು ಶಾಲೆಯಲ್ಲಿ ಬಿಸಿಯೂಟದ ಕೊಠಡಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದ ಅವರು, ಪ್ರಸ್ತುತ ಹೊನ್ನಾವರ ಪಟ್ಟಣದ ನಂಬರ್ 1 ಶಾಲೆಯ ಮುಖ್ಯ ಶಿಕ್ಷಕಿಯಾಗಿ ಶಾಲೆಯ ಕೊಠಡಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದು ಮೂರು ಹೊಸ ಕೊಠಡಿಗಳ ನಿರ್ಮಾಣ ಹಾಗೂ ದಾನಿಗಳ ಮೂಲಕ ಹಲವು ಸೌಲಭ್ಯಗಳನ್ನು ಒದಗಿಸಿದ್ದಾರೆ.
ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಿದ ಸಾಧಕಿ
ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಉಷಾ ನಾಯಕ ಅವರಿಗೆ ಸಲ್ಲುತ್ತದೆ. ಪಾಲಕರನ್ನು ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಇವರ ಈ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈಗಾಗಲೇ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಇದೀಗ ಕರಾವಳಿ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತೊಂದು ಗರಿಯಾಗಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಇಡೀ ತಾಲೂಕಿನ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರಿಗೆ ಅತೀವ ಸಂತಸ ತಂದಿದೆ.
