Spread the love

ಕಾರವಾರ: ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಇಳವಾದಲ್ಲಿ ಕೃಷಿ ಭೂಮಿಯನ್ನು ದುರುಪಯೋಗಪಡಿಸಿಕೊಂಡು ಅನಧಿಕೃತ ರೆಸಾರ್ಟ್ ಹಾಗೂ ಕಾನೂನುಬಾಹಿರವಾಗಿ ಜಲಸಾಹಸ ಕ್ರೀಡೆಗಳನ್ನು (ವಾಟರ್ ಆಕ್ಟಿವಿಟಿಸ್) ನಡೆಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಹಣ ಗಳಿಕೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿರುವ ಕೆಲವು ಪ್ರಭಾವಿಗಳು ಸರ್ಕಾರದ ನಿಯಮಗಳು ಹಾಗೂ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ಈ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಅವೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಳವಾದ ಸರ್ವೆ ನಂಬರ್ 250ರ ಜಾಗವನ್ನು ಅಧಿಕೃತವಾಗಿ ಕೃಷಿಯೇತರ (NA) ಭೂಮಿಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಆದರೆ, ಇದೇ ಗ್ರಾಮದ ಸರ್ವೆ ನಂಬರ್ 248ರ ಜಾಗಕ್ಕೆ ಯಾವುದೇ ಎನ್‌ಎ ಪರವಾನಗಿ ದೊರೆತಿಲ್ಲ. ಆದರೂ ಸರ್ವೆ ನಂ. 250 ರ ದಾಖಲೆಗಳನ್ನು ಮುಂದಿಟ್ಟುಕೊಂಡು, ನದಿಗೆ ಹೊಂದಿಕೊಂಡಿರದ ಸರ್ವೆ ನಂ. 248ರ ಕೃಷಿ ಭೂಮಿಯಲ್ಲಿ ರಾಜಾರೋಷವಾಗಿ ರಾಫ್ಟಿಂಗ್ ಸೇರಿದಂತೆ ಅಪಾಯಕಾರಿ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.

ಸ್ಥಳೀಯ ಅಧಿಕಾರಿಗಳ ಕೃಪಾಕಟಾಕ್ಷದಿಂದಾಗಿಯೇ ಈ ಅಕ್ರಮ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಯಾವುದೇ ಅಧಿಕೃತ ಅನುಮತಿಯಿಲ್ಲದೆ ಮತ್ತು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನದಿಯಲ್ಲಿ ರಾಫ್ಟಿಂಗ್ ನಡೆಸುತ್ತಿರುವುದು ಪ್ರವಾಸಿಗರ ಪ್ರಾಣಕ್ಕೆ ಸಂಚಕಾರ ತರುವಂತಿದೆ. 

ಸರ್ಕಾರಕ್ಕೆ ನಿಯಮಾನುಸಾರ ರಾಯಧನ ಪಾವತಿಸಿ, ಎಲ್ಲಾ ಕಾನೂನಾತ್ಮಕ ದಾಖಲೆ ಮತ್ತು ಪರವಾನಗಿಗಳನ್ನು ಪಡೆದು ಪ್ರಾಮಾಣಿಕವಾಗಿ ರೆಸಾರ್ಟ್ ಹಾಗೂ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವ ಉದ್ಯಮಿಗಳಿಗೆ ಈ ಅಕ್ರಮ ದಂಧೆಯಿಂದ ಭಾರಿ ಅನ್ಯಾಯವಾಗುತ್ತಿದೆ. ನಿಯಮ ಪಾಲಿಸುವ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದರೆ, ಅಕ್ರಮ ಎಸಗುವವರು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಭಾರಿ ಲಾಭ ಗಳಿಸುತ್ತಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳನ್ನು ಹಾದಿತಪ್ಪಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೇವಲ ಲಾಭದ ದುರಾಸೆಯಿಂದ ಸುರಕ್ಷತಾ ಮಾನದಂಡಗಳನ್ನು ಕಡೆಗಣಿಸಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮುಂದುವರಿಸಲು ಬಿಟ್ಟರೆ, ಜೋಯಿಡಾ ಮತ್ತು ದಾಂಡೇಲಿ ಭಾಗದ ಒಟ್ಟಾರೆ ಪ್ರವಾಸೋದ್ಯಮದ ಘನತೆಗೆ ಧಕ್ಕೆ ಬರಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಪ್ರವಾಸಿಗರ ಜೀವದ ಸುರಕ್ಷತೆ ಮತ್ತು ಸ್ಥಳೀಯ ಅಧಿಕೃತ ಉದ್ಯಮಿಗಳ ಹಿತದೃಷ್ಟಿಯಿಂದ ಕಾನೂನು ಪಾಲಿಸುವವರಿಗೆ ಮಾತ್ರ ವ್ಯವಹಾರ ನಡೆಸಲು ಅವಕಾಶ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಂ. 248 ರಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡು ಪ್ರವಾಸಿಗರ ಜೀವದೊಂದಿಗೆ ಆಟವಾಡುತ್ತಿರುವ ಅನಧಿಕೃತ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪ್ರಾಮಾಣಿಕ ಪ್ರವಾಸೋದ್ಯಮಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *