Spread the love

ಕಾರವಾರದ ಪ್ರತಿಭಾನ್ವಿತ ಕುವರಿ, ಶಾಸಕ ಹಾಗೂ ಕೆಎಸ್‌ಎಂಸಿಎ ನಿಗಮದ ಅಧ್ಯಕ್ಷರಾಗಿರುವ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರು ಪ್ರತಿಷ್ಠಿತ ‘ಫೆಮಿನಾ ಮಿಸ್ ಇಂಡಿಯಾ 2026’ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಕರಾವಳಿಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಈ ಅದ್ದೂರಿ ಸೌಂದರ್ಯ ಸ್ಪರ್ಧೆಯಲ್ಲಿ ಸಾಧ್ವಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಇಡೀ ಕರುನಾಡಿಗೆ ಅಪಾರ ಹೆಮ್ಮೆ ತಂದಿದ್ದಾರೆ.

ಭುವನೇಶ್ವರದ ಪ್ರತಿಷ್ಠಿತ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KIIT) ಆವರಣದಲ್ಲಿ ಜರುಗಿದ ಈ ಬೃಹತ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ಅನೇಕ ಪ್ರತಿಭಾವಂತ ರೂಪದರ್ಶಿಯರು ಭಾಗವಹಿಸಿದ್ದರು. ಈ ತೀವ್ರ ಪೈಪೋಟಿಯ ನಡುವೆಯೂ ತಮ್ಮ ಅದ್ಭುತ ಸೌಂದರ್ಯ, ಜಾಣ್ಮೆ ಹಾಗೂ ಆತ್ಮವಿಶ್ವಾಸದಿಂದ ತೀರ್ಪುಗಾರರ ಗಮನ ಸೆಳೆದ ಸಾಧ್ವಿ ಸೈಲ್, ಅಂತಿಮವಾಗಿ ಮಿಸ್ ಇಂಡಿಯಾ ವಿಜೇತೆಯಾಗಿ ಕಿರೀಟ ತೊಟ್ಟಿದ್ದಾರೆ. ಇದೇ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ರಾಜನಂದಿನಿ ಪವಾರ್ ಅವರು ಪ್ರಥಮ ರನ್ನರ್-ಅಪ್ (First Runner-up) ಆಗಿ ಹೊರಹೊಮ್ಮಿದ್ದಾರೆ.

ತಮ್ಮ ಮುದ್ದಿನ ಮಗಳು ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವುದಕ್ಕೆ ಕಾರವಾರ ಶಾಸಕ ಸತೀಶ್ ಸೈಲ್ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಗಳಿಗೆ ವಿಡಿಯೋ ಕಾಲ್ ಮಾಡಿದ ಶಾಸಕರು, ಸಾಧ್ವಿಗೆ ಪ್ರೀತಿಯಿಂದ ಅಭಿನಂದನೆ ಸಲ್ಲಿಸಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಕಡಲನಗರಿಯ ಯುವತಿ ಮಿಸ್ ಇಂಡಿಯಾ ಆಗಿರುವುದಕ್ಕೆ ಕಾರವಾರದಾದ್ಯಂತ ಸಂಭ್ರಮ ಮನೆಮಾಡಿದ್ದು, ಜನತೆ ಹಾಗೂ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Leave a Reply

Your email address will not be published. Required fields are marked *