Spread the love

ಕಾರವಾರ: ಎಐಸಿಸಿ (AICC) ವತಿಯಿಂದ ಎಸ್‌ಐಆರ್ (SIR) ಪ್ರಕ್ರಿಯೆ ವೀಕ್ಷಕರಾಗಿ ನಿಯೋಜನೆಗೊಂಡಿರುವ ಮಾಜಿ ಶಾಸಕಿ ಹಾಗೂ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಿವಿಧ ರಾಜಕೀಯ ವಿದ್ಯಮಾನಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಎಸ್‌ಐಆರ್ ಪ್ರಕ್ರಿಯೆ ಹಾಗೂ ಶಾಸಕರ ನಡೆ 

ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದರೂ ಮೂವರು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದರೆ ಅವರನ್ನು ವಂಚಿತರನ್ನಾಗಿಸುವುದು ಏಕೆ? ಅವರು ಪ್ರಯತ್ನ ಮಾಡಲಿ. ಜಿಲ್ಲೆಯ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಘಟನೆ, ಕಾರ್ಯಕರ್ತರು ಮತ್ತು ಬಿಎಲ್‌ಎ-2 (BLA2) ಗಳು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದಾರೆ. ಈ ಪ್ರಕ್ರಿಯೆ ನಡೆಯುವಾಗ ಶಾಸಕರು ಇರಲೇಬೇಕು ಎಂಬ ನಿಯಮವೇನೂ ಇಲ್ಲ” ಎಂದು ಸಮರ್ಥಿಸಿಕೊಂಡರು.

ಬಿಜೆಪಿ ವಿರುದ್ಧ ಮತದಾರರ ಪಟ್ಟಿ ಕಡಿತದ ಆರೋಪ 

ಮತದಾರರ ಪಟ್ಟಿ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಎಸ್‌ಐಆರ್ ಬಳಿಕ ಯಾವೆಲ್ಲಾ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗಿದೆಯೋ, ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಬಿಜೆಪಿ ಇದೇ ತಂತ್ರಗಾರಿಕೆಯನ್ನು ಮಾಡಲು ಪ್ರಯತ್ನಿಸುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

ವಾಸ ಪ್ರಮಾಣಪತ್ರ (PRC) ಹಾಗೂ ಭದ್ರತೆ 

ಕಡ್ಡಾಯ ವಾಸ ಪ್ರಮಾಣಪತ್ರ (PRC) ನೀಡುವ ಕುರಿತ ಆಕ್ಷೇಪಗಳಿಗೆ ಉತ್ತರಿಸಿದ ಅವರು, “ಬಾಂಗ್ಲಾದೇಶಿಯರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದರೆ ‘ಚೌಕಿದಾರ್’ ಹಾಗೂ ಕೇಂದ್ರ ಗೃಹಸಚಿವರು ಏನು ಮಾಡುತ್ತಿದ್ದಾರೆ? ಕರ್ನಾಟಕದ ಬಗ್ಗೆಯೇ ಬಿಜೆಪಿಗೆ ಯಾಕೆ ಇಷ್ಟೊಂದು ಆತಂಕ?” ಎಂದು ಪ್ರಶ್ನಿಸಿದರು. ಎಸ್‌ಐಆರ್ ಆರಂಭವಾದ ಬಳಿಕ ಪಿಆರ್‌ಸಿ ಅಧಿಸೂಚನೆ ಹೊರಡಿಸಿದ ಬಗ್ಗೆ ಮಾತನಾಡಿ, ಎಲ್ಲವೂ ಕಾನೂನಿನ ಪ್ರಕಾರವೇ ನಡೆಯುತ್ತಿದೆ, ಅವರು ಅವರ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು.

ಮಹಿಳಾ ಮೀಸಲಾತಿ ಹಾಗೂ ಕುದುರೆ ವ್ಯಾಪಾರ 

ಮಹಿಳಾ ಮೀಸಲಾತಿ ಮಸೂದೆ ಕುರಿತು ಪ್ರತಿಕ್ರಿಯಿಸಿ, “ಕೇಂದ್ರ ಸರ್ಕಾರವು ಡಿಲಿಮಿಟೇಶನ್ (Delimitation) ಬಿಲ್ ಅನ್ನು ಕೈಬಿಟ್ಟರೆ, ನಾವು ನಾಳೆಯೇ ಮಹಿಳಾ ಮೀಸಲಾತಿಗೆ ಬೆಂಬಲ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, “ರಾಜ್ಯಸಭೆಯಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಟಿಎಂಸಿ ಸೇರಿದಂತೆ ಹಲವರು ಯಾಕೆ ಆ ಕಡೆ ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ” ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *