ಕಾರವಾರ: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಒಲಿಯದಿರುವುದು ತೀವ್ರ ನಿರಾಶೆ ಹಾಗೂ ಬೇಸರ ತರಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಸಾದ ಗಾಂವಕರ್ ಅಮದಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸರ್ಕಾರದ ಮಟ್ಟದಲ್ಲಿ ಧ್ವನಿಯಾಗುವವರ ಅಗತ್ಯವಿತ್ತು”
ಉತ್ತರಕನ್ನಡ ಜಿಲ್ಲೆಯು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಹತ್ವದ ಹಲವು ಯೋಜನೆಗಳಿಗೆ ನೆಲೆಯಾಗಿದೆ. ಇನ್ನೂ ಅನೇಕ ಪ್ರಮುಖ ಯೋಜನೆಗಳು ಜಾರಿಯಾಗುವ ಹಂತದಲ್ಲಿದ್ದು, ಇಂತಹ ನಿರ್ಣಾಯಕ ಸಂದರ್ಭದಲ್ಲಿ ಜಿಲ್ಲೆಯ ಪರವಾಗಿ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಧ್ವನಿಯಾಗುವ ಸಚಿವರ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆ
ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉತ್ತರಕನ್ನಡವು ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಹಲವು ಅಭಿವೃದ್ಧಿ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದೆ. ಅರಣ್ಯ, ನದಿ, ಸಮುದ್ರ ಸೇರಿದಂತೆ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿರುವ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರಕನ್ನಡದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ಒಂದು ವೇಳೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿದ್ದರೆ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ವೇಗ ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಗೆ ಪ್ರಾತಿನಿಧ್ಯ ನೀಡದೇ ಇರುವುದು ಕೇವಲ ಬೇಸರದ ಸಂಗತಿಯಷ್ಟೇ ಅಲ್ಲ, ಬದಲಾಗಿ ಜಿಲ್ಲೆಯ ಜನರ ನಿರೀಕ್ಷೆ ಹಾಗೂ ಆಶೋತ್ತರಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಪ್ರಸಾದ ಗಾಂವಕರ್ ಕಳವಳ ವ್ಯಕ್ತಪಡಿಸಿದ್ದಾರೆ.
