ಕಾರವಾರ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಬಿಣಗಾ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ವಸಂತ ಸಿ. ಗೌಡ ಅವರು ಶೈಕ್ಷಣಿಕ ಕಾಳಜಿ ಹಾಗೂ ದೇಶಪ್ರೇಮ ಮೆರೆದಿದ್ದಾರೆ.
ತಾಲೂಕಿನ ಬಿಣಗಾ ಒಕ್ಕಲಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ.
“ಮಕ್ಕಳ ಶಿಕ್ಷಣಕ್ಕೆ ನಮ್ಮಿಂದಾಗುವ ಸಣ್ಣ ನೆರವು ನೀಡುವುದೇ ದೊಡ್ಡ ಸಂತೋಷ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿದ್ದೇನೆ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುತ್ತೇನೆ” ಎಂದು ವಸಂತ ಸಿ. ಗೌಡ ಹೇಳಿದರು.
ಸೀಮಿತ ಆದಾಯದಲ್ಲಿಯೇ ವಸಂತ ಸಿ. ಗೌಡ ಅವರು ಪ್ರತಿವರ್ಷ ಯಾವುದಾದರೂ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ವಸಂತ ಗೌಡ ಅವರ ಕುಟುಂಬದ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು. ಸ್ಥಳೀಯ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ವಸಂತ ಸಿ. ಗೌಡ ಅವರ ಸೇವಾ ಮನೋಭಾವಕ್ಕೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
