ಕುಮಟಾ: ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಹಳ್ಳದ ಬಳಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 12 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಬಾಗಲಕೋಟೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು, ಅದೃಷ್ಟವಶಾತ್ ಭಾರೀ ಪ್ರಾಣಹಾನಿ ತಪ್ಪಿದೆ.
ಈ ಸರ್ಕಾರಿ ಸಾರಿಗೆ ಬಸ್ ಬಾಗಲಕೋಟೆಯಿಂದ ಹೊರಟು ಶಿರಸಿ ಮಾರ್ಗವಾಗಿ ದೇವಿಮನೆ ಘಟ್ಟದ ಮೂಲಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಮಾಸ್ತಿಹಳ್ಳದ ಸಮೀಪ ಬರುತ್ತಿದ್ದಂತೆಯೇ ಕಡಿದಾದ ತಿರುವಿನಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆಯಿಂದ ಕೆಳಕ್ಕೆ ಉರುಳಿ ಕಂದಕಕ್ಕೆ ಬಿದ್ದಿದೆ.
ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ 12 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಬಸ್ ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಭೀಕರ ಅಪಘಾತದ ಮಾಹಿತಿ ತಿಳಿದ ತಕ್ಷಣವೇ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಂದಕಕ್ಕೆ ಬಿದ್ದಿದ್ದ ಬಸ್‌ನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ತ್ವರಿತವಾಗಿ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ದೋಷದಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ಅಜಾಗರೂಕತೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
