Spread the love

ಕಾರವಾರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮೈಸೂರು ರೈಲ್ವೆ ವಿಭಾಗದ ಸಕಲೇಶಪುರ ವ್ಯಾಪ್ತಿಯ ಯಡಕುಮರಿ ಹಾಗೂ ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಅರೆಬೆಟ್ಟದ ಸಮೀಪ ಶನಿವಾರ ರಾತ್ರಿ ಭಾರೀ ಭೂಕುಸಿತ ಸಂಭವಿಸಿದ್ದು, ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗದ ಪ್ರಮುಖ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಭೂಕುಸಿತದಿಂದ ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಗಳು ಕುಸಿದುಬಿದ್ದಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಏಳು ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಇದರಿಂದ ನೂರಾರು ಪ್ರಯಾಣಿಕರು ವಿವಿಧ ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ.

ನೈಋತ್ಯ ರೈಲ್ವೆ ಪ್ರಕಟಿಸಿರುವ ಮಾಹಿತಿಯಂತೆ, ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ (16585), ಕೆಎಸ್‌ಆರ್ ಬೆಂಗಳೂರು–ಕೊಝಿಕೋಡ್ ಎಕ್ಸ್‌ಪ್ರೆಸ್ (16511) ಹಾಗೂ ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (17377) ರೈಲುಗಳ ಸಂಚಾರವನ್ನು ಹಾಸನದವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕೆಎಸ್‌ಆರ್ ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ (16595) ರೈಲು ಸಕಲೇಶಪುರದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.

ಹಿಂತಿರುಗುವ ಮಾರ್ಗದಲ್ಲಿ ಮುರುಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ (16586) ಹಾಗೂ ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ (17378) ರೈಲುಗಳನ್ನು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಕೊಝಿಕೋಡ್–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16512) ರೈಲು ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗಿನ ಸೇವೆಯನ್ನು ರದ್ದುಪಡಿಸಲಾಗಿದೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಇನ್ನೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳಿಯ ಮೇಲೆ ಬಿದ್ದಿರುವ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಪ್ರತಿಕೂಲ ಹವಾಮಾನದ ನಡುವೆಯೂ ರೈಲ್ವೆ ಸಿಬ್ಬಂದಿ ಯಂತ್ರೋಪಕರಣಗಳ ಸಹಾಯದಿಂದ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪರಿಸ್ಥಿತಿ ಸಂಪೂರ್ಣ ಸಹಜವಾಗುವವರೆಗೆ ಕರಾವಳಿ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಮುಂದುವರಿಯುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಪ್ರಯಾಣಿಕರು ತಮ್ಮ ರೈಲುಗಳ ಸಂಚಾರ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು ನಂತರವೇ ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *