Spread the love

ಕಾರವಾರ: ತಾಲೂಕಿನ ಅಸ್ನೋಟಿ ಮಧೇವಾಡಾ ಗ್ರಾಮದ ಆರಾಧ್ಯ ದೈವ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆದಿರುವ ಜಮೀನು ಪರಭಾರೆ ಹಾಗೂ ಹಣಕಾಸು ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಡಾ. ಗಜೇಂದ್ರ ನಾಯ್ಕ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ‘ಅಸ್ನೋಟಿ ಗ್ರಾಮ ಸೇವಾ ಸಮಿತಿ’ ಹಾಗೂ ‘ಕರ್ನಾಟಕ ಸನಾತನ ಧರ್ಮ ರಕ್ಷಣಾ ವೇದಿಕೆ’ಯ ಜಂಟಿ ಆಶ್ರಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

“ದೇವಸ್ಥಾನದ ಮಾಜಿ ಮುಕ್ತೇಸರರು ಹಾಗೂ ದತ್ತಿ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳ ಶಾಮೀಲಿನಿಂದ ಇಲ್ಲಿ ಭಾರಿ ಅಕ್ರಮ ನಡೆದಿದೆ. ದೇವಸ್ಥಾನಕ್ಕೆ ಸೇರಿದ ಬರೋಬ್ಬರಿ 1 ಎಕರೆ 32 ಗುಂಟೆ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.

“ದೇವಸ್ಥಾನವು ಸರ್ವ ಸಮುದಾಯಗಳಿಗೂ ಸೇರಿದ್ದಾಗಿದೆ. ಆದರೆ, ರೂಪಾಲಿ ನಾಯ್ಕ ಅವರು ಶಾಸಕರಾಗಿದ್ದ ಅವಧಿಯಲ್ಲಿ ಶಾಸಕರ ಅನುದಾನದಡಿ 11 ಲಕ್ಷ ರೂ. ಪಡೆದು, ದೇವಸ್ಥಾನದ ಜಮೀನಿನಲ್ಲೇ ನಿಯಮಬಾಹಿರವಾಗಿ ‘ಕೊಂಕಣ ಮರಾಠ ಸಮುದಾಯ ಭವನ’ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ತೀವ್ರ ವಿರೋಧದ ಬಳಿಕ ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡು ಜಮೀನು ದೇವಸ್ಥಾನಕ್ಕೆ ಹಿಂತಿರುಗಿದೆ. ಆದರೆ, ಅಲ್ಲಿ ನಿರ್ಮಿಸಲಾಗಿರುವ ಅಪೂರ್ಣ ಕಟ್ಟಡವನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ (PWD) ನಿರಾಕರಿಸುತ್ತಿದ್ದು, ಖರ್ಚಾದ ಹಣವನ್ನು ಮರುಪಾವತಿಸುವಂತೆ ಕೇಳುತ್ತಿರುವುದು ಅತ್ಯಂತ ಅನ್ಯಾಯಕರ” ಎಂದು ಕಿಡಿಕಾರಿದರು.

“ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸುಮಾರು 30ರಿಂದ 35 ಲಕ್ಷ ರೂ.ಗಳಿದ್ದು, ವಾರ್ಷಿಕ ಜಾತ್ರೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಲಕ್ಷಾಂತರ ರೂ. ಆದಾಯ ಬರುತ್ತಿದೆ. ಆದಾಗ್ಯೂ, ಹಲವು ವರ್ಷಗಳಿಂದ ಲೆಕ್ಕಪರಿಶೋಧನೆ ನಡೆಸಿಲ್ಲ. ಮುಕ್ತೇಸರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಯಾವುದೇ ನಿಯಮಾನುಸಾರವಿಲ್ಲದೆ ಮನಬಂದಂತೆ ಹುಂಡಿ ತೆರೆಯಲಾಗುತ್ತಿದ್ದು, ಭಕ್ತರ ಹಣ ದುರ್ಬಳಕೆಯಾಗುತ್ತಿದೆ” ಎಂದು ದೂರಿದರು.

1950ರಲ್ಲೇ ‘ಸಿ’ ವರ್ಗದ ಸಂಸ್ಥೆಯಾಗಿ ನೋಂದಣಿಯಾಗಿರುವ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಅಧಿಸೂಚಿತ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ದಿನಾಂಕ 20-02-2025 ರಂದು ಜಿಲ್ಲಾಧಿಕಾರಿಗಳು ಸಂಬಂಧಿತ ದಾಖಲೆಗಳನ್ನು ಬೆಂಗಳೂರಿನ ಮುಜರಾಯಿ ಆಯುಕ್ತರಿಗೆ ಕಳುಹಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ದತ್ತಿ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಅಸ್ನೋಟಿ ಗ್ರಾಮ ಸೇವಾ ಸಮಿತಿ ಅಧ್ಯಕ್ಷ ಸೋಹನ ಜಿ.ಸಾಳುಂಕೆ ಮಾತನಾಡಿ, “ಕಡತ ವಿಳಂಬಕ್ಕೆ ಕಾರಣರಾದ ಆಯುಕ್ತರಿಂದ ಸ್ಪಷ್ಟನೆ ಪಡೆಯಬೇಕು. ಮಾಜಿ ಮುಕ್ತೇಸರರು ಹಾಗೂ ಶಾಮೀಲಾದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು. ದೇವಸ್ಥಾನದ ಸಂಪೂರ್ಣ ಆಡಿಟ್ ಮಾಡಿಸಿ, ಅನಧಿಕೃತ ಕಟ್ಟಡವನ್ನು ತಕ್ಷಣ ತೆರವುಗೊಳಿಸಿ ಪಾರದರ್ಶಕ ಆಡಳಿತ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗಣಪತಿ ಆಚಾರಿ, ಕನಯ್ಯಾ ವಾರೀಕರ, ಸೂರಜ್ ಅಸ್ನೋಟಿಕರ, ಶರದ್ ಬಾಂದೇಕರ, ಕಿಶನ್ ವಾರಿಕರ್, ಚಂದ್ರಕಾಂತ ಹರಿಕಾಂತ, ಚಂದ್ರಕಾಂತ ಬಾಂದೇಕರ, ಸಂಜಯ ದೇವದಾಸ, ಆನಂದು ಗಜಿಂಕರ್, ವಾಮನ್ ಆಚಾರಿ, ಆನಂದು ಸಾಳುಂಕೆ, ಅಶೋಕ್ ರಾಣೆ, ದೀಪಕ್ ನಾಯ್ಕ, ಚಂದ್ರಕಾಂತ ನಾಯ್ಕ, ರಾಜೇಂದ್ರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *