Spread the love

ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ಅಸ್ತುಲಿ ಸಮೀಪ ಮದ್ಯದ ಅಮಲಿನಲ್ಲಿ ಟ್ಯಾಕ್ಸಿ ಚಾಲಕನೋರ್ವ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸರಣಿ ಅಪಘಾತ ಮಾಡಿರುವ ಘಟನೆ ವರದಿಯಾಗಿದೆ. ಕೇರಳದಿಂದ ಗೋವಾ ಮಾರ್ಗವಾಗಿ ಬೆಂಗಳೂರಿನತ್ತ ತೆರಳುತ್ತಿದ್ದ ಟ್ಯಾಕ್ಸಿ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ಈ ಅವಾಂತರ ಸೃಷ್ಟಿಸಿದ್ದಾನೆ. 

ಅಸ್ತುಲಿ ಬಳಿ ಅತಿವೇಗದಿಂದ ಬಂದ ಟ್ಯಾಕ್ಸಿಯು ಮೊದಲಿಗೆ ಹತ್ತು ಚಕ್ರದ ಲಾರಿಯೊಂದಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅದಾದ ಬಳಿಕವೂ ವಾಹನ ನಿಯಂತ್ರಿಸಲಾಗದ ಚಾಲಕ, ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದ ಹೊಸ ಹೆಕ್ಟರ್ ಕಾರಿಗೂ ಗುದ್ದಿದ್ದಾನೆ.

ಅಪಘಾತದ ತೀವ್ರತೆಗೆ ಟ್ಯಾಕ್ಸಿ ಹಾಗೂ ಹೆಕ್ಟರ್ ಕಾರು ಎರಡೂ ಸಾಕಷ್ಟು ಜಖಂಗೊಂಡಿವೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕವೂ ವಾಹನದಿಂದ ಕೆಳಗಿಳಿಯದೆ ಕಾರಿನಲ್ಲೇ ಕುಳಿತಿದ್ದ ಟ್ಯಾಕ್ಸಿ ಚಾಲಕ, ತಾನು ಮದ್ಯ ಸೇವಿಸಿರುವುದನ್ನು ಸ್ಥಳೀಯರ ಬಳಿ ನಿರ್ಲಜ್ಜವಾಗಿ ಒಪ್ಪಿಕೊಂಡಿದ್ದಾನೆ. ತನ್ನ ತಪ್ಪಿನಿಂದಲೇ ಈ ಅಪಘಾತ ಸಂಭವಿಸಿದೆ, ಬೇಕಿದ್ದರೆ ತನ್ನನ್ನು ಹೊಡೆಯಿರಿ ಎಂದು ಆತ ಹೇಳುತ್ತಿದ್ದದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರಾಮನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಅಪಘಾತ ನಡೆದ ಸ್ಥಳವು ಲೋಂಡಾ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವುದನ್ನು ಖಚಿತಪಡಿಸಿಕೊಂಡ ರಾಮನಗರ ಪೊಲೀಸರು, ಕೂಡಲೇ ಲೋಂಡಾ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ. ಸದ್ಯ ಲೋಂಡಾ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮದ್ಯವ್ಯಸನಿ ಚಾಲಕನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *