ಹೊನ್ನಾವರ: ಮನೆಯವರು ಹೊರಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಗೋದ್ರೇಜ್ ಕಪಾಟು ಒಡೆದು ₹4.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಇಡಗುಂಜಿ ಸಮೀಪದ ಕುಳಿಮನೆ ಶಾಂತಿನಗರದಲ್ಲಿ ನಡೆದಿದೆ.
ಶಾಂತಿನಗರ ಕುಳಿಮನೆ ನಿವಾಸಿ, ಶಿಕ್ಷಕಿ ಸಂಧ್ಯಾ ಕೋಂ ಗುರುದತ್ತ ಶೇಟ್, 53, ಅವರು ನೀಡಿದ ದೂರಿನ ಆಧಾರದ ಮೇಲೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಆಗಸ್ಟ್ 11ರಂದು ಬೆಳಗ್ಗೆ 9:45 ರಿಂದ ಮಧ್ಯಾಹ್ನ 1:00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಗೋದ್ರೇಜ್ ಕಪಾಟನ್ನು ತೆಗೆದು, ಅದರ ಲಾಕರ್ ಅನ್ನು ಕಬ್ಬಿಣದ ಕತ್ತಿಯಂತಹ ಆಯುಧದಿಂದ ಮೀಟಿ ತೆರೆದಿದ್ದಾರೆ. ಬಳಿಕ ಲಾಕರ್ನಲ್ಲಿದ್ದ ಸುಮಾರು ₹4,80,000 ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹10,000 ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯಿಂದ ಚಿನ್ನಾಭರಣ ಹಾಗೂ ಹಣ ಕಳವಾಗಿರುವುದು ಗಮನಕ್ಕೆ ಬಂದ ಬಳಿಕ ಸಂಧ್ಯಾ ಅವರು ಮಂಕಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳವಾದ ಚಿನ್ನಾಭರಣ ಹಾಗೂ ಹಣವನ್ನು ಪತ್ತೆಹಚ್ಚಿ, ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 331(3) ಹಾಗೂ 305 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
