ಕಾರವಾರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆಪ್ಟೆಂಬರ್ 10ರಂದು 100 ದಿನಗಳು ಪೂರ್ಣಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶತದಿನಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ಇದರ ಅಂಗವಾಗಿ ವಿಧಾನಸೌಧ, ಮೈಸೂರು ಅರಮನೆ ಸೇರಿದಂತೆ ರಾಜ್ಯದ ಪ್ರಮುಖ ಪಾರಂಪರಿಕ ಕಟ್ಟಡಗಳು ನಾಲ್ಕು ದಿನಗಳ ಕಾಲ ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಸೆಪ್ಟೆಂಬರ್ 10 ರಿಂದ ನಾಲ್ಕು ದಿನಗಳ ಕಾಲ ರಾಜ್ಯದ 11 ಪ್ರಮುಖ ಪಾರಂಪರಿಕ ಕಟ್ಟಡಗಳು ಹಾಗೂ ಸ್ಥಳಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಆಯೋಜಿಸಲಾಗಿದೆ. ಬೆಂಗಳೂರಿನ ಪುರಭವನ, ಕೆ.ಆರ್.ಪುರಂ ತೂಗುಸೇತುವೆ, ಮೈಸೂರು ಅರಮನೆ ಹಾಗೂ ಜಯಮಾರ್ತಾಂಡ ಮಹಾದ್ವಾರ, ಹಂಪಿಯ ವಿಶ್ವವಿಖ್ಯಾತ ವಿರೂಪಾಕ್ಷೇಶ್ವರ ದೇವಾಲಯದ ಬಿಷ್ಟಪ್ಪಯ್ಯನ ಗೋಪುರ, ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮತ್ತು ಜಗತ್ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳು ಬೆಳಕಿನ ಅಲಂಕಾರದಿಂದ ಕಂಗೊಳಿಸಲಿವೆ.
ಇದರ ಜೊತೆಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಬಿಂಬಿಸುವ ಮನಮೋಹಕ ಎಲ್‌ಇಡಿ ಪ್ರದರ್ಶನ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ತ್ರಿ-ಡಿ ಮ್ಯಾಪಿಂಗ್ ಪ್ರದರ್ಶನಗಳನ್ನು ಆಯ್ದ ಕಟ್ಟಡಗಳ ಮೇಲೆ ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಜಿಲ್ಲಾಡಳಿತಗಳ ವತಿಯಿಂದ ವಿಶೇಷ ದೀಪಾಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು 100 ದಿನಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಆಲಿಸಿ ಪರಿಹರಿಸಲು ‘ಪ್ರಜಾಸೇವಾ’ ಇಲಾಖೆ ಸ್ಥಾಪನೆ, ಗ್ಯಾರಂಟಿ ಯೋಜನೆಗಳಡಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಹಾಗೂ ರೌಡಿಗಳ ನಿಗ್ರಹಕ್ಕಾಗಿ ಜಿಲ್ಲೆಗೊಂದು ಪಡೆ ರಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ವಾರ್ತಾ ಇಲಾಖೆ ತಿಳಿಸಿದೆ.
ಇದೇ ಅವಧಿಯಲ್ಲಿ ಕೇಂದ್ರದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಬೇಡಿಕೆಗಳನ್ನು ಪ್ರಬಲವಾಗಿ ಮಂಡಿಸುವುದು, ನೂತನ ಸಿಎಸ್‌ಆರ್ ನೀತಿ ಜಾರಿ, ಬರ ಪರಿಸ್ಥಿತಿ ನಿರ್ವಹಣೆಗೆ ವಿಭಾಗವಾರು ಪರಿಶೀಲನೆ ನಡೆಸಿ ಅಗತ್ಯ ಸಿದ್ಧತೆ, ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ಹಾಗೂ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹೊಸ ಸ್ಪಿಲ್ ವೇ ಗೇಟ್‌ಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಜೊತೆಗೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರಿಗೂ ಮಹತ್ವದ ಜಲಮೂಲವಾಗಿರುವ ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ನೀರಿನ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಹಾಗೂ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಂಡಿರುವುದನ್ನೂ ಸರ್ಕಾರದ ಪ್ರಮುಖ ಸಾಧನೆಗಳಾಗಿ ಉಲ್ಲೇಖಿಸಲಾಗಿದೆ.
ಮುಂದಿನ ದಿನಗಳಲ್ಲಿ ‘ದೃಢ ಕರ್ನಾಟಕ’ದ ಸಂಕಲ್ಪ ಸಾಕಾರಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೆಜ್ಜೆಗಳನ್ನು ಇಡಲು ಚಿಂತನೆ ನಡೆಸಿದ್ದಾರೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
