Spread the love

ಕಾರವಾರ: ಜಿಲ್ಲೆಯ ಕಾರವಾರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದ್ದು, ಸಾಲ ಪಡೆದ ವ್ಯಕ್ತಿಯೊಬ್ಬರು ಅಸಲಿಗಿಂತ ದುಪ್ಪಟ್ಟು ಹಣ ಮರಳಿಸಿದರೂ ಸರ್ವಿಸ್ ರಿವಾಲ್ವರ್‌ನಿಂದ ಗುಂಡಿಕ್ಕಿ ಕೊಲ್ಲುವುದಾಗಿ ಹಾಗೂ ಮನೆ ಒಡೆಯುವುದಾಗಿ ಜೀವಬೆದರಿಕೆ ಹಾಕಿದ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಬಡ್ಡಿಬಾಕರ ಕಿರುಕುಳದ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾರವಾರದ ಕಾಜುಬಾಗ್ ನಿವಾಸಿ ರೋಹನ್ ನರಸಿಂಹ ರಾಯ್ಕರ್, ಪಿಕಳೆ ರಸ್ತೆಯ ನಿವಾಸಿಗಳಾದ ಸುನೀಲ್ ಸದಾನಂದ ಕಲ್ಗುಟುಕರ್ ಹಾಗೂ ಸಂಪದಾ ಸುನೀಲ್ ಕಲ್ಗುಟುಕರ್ ಪ್ರಕರಣದ ಆರೋಪಿಗಳಾಗಿದ್ದಾರೆ. ಕಾರವಾರದ ಶೇಜವಾಡ ನಿವಾಸಿ, ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಪ್ರಣೀತ್ ದಿಗಂಬರ ಶೇಜವಾಡಕರ್ (43) ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದಂಧೆಯ ಸ್ವರೂಪ ಹಾಗೂ ಸುಲಿಗೆಯ ಕುರಿತು ವಿವರಿಸಿರುವ ಫಿರ್ಯಾದಿ ಪ್ರಣೀತ್, 2024ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ರೋಹನ್ ಬಳಿ 1 ಲಕ್ಷ ರೂ. ಸಾಲ ಕೇಳಿದಾಗ, 10,000 ರೂ. ಬಡ್ಡಿಯನ್ನು ಮುಂಗಡವಾಗಿ ಕಡಿತಗೊಳಿಸಿ ಕೇವಲ 90,000 ರೂ. ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಈ ರೀತಿ ಹಂತ ಹಂತವಾಗಿ ಹಣದ ಅವಶ್ಯಕತೆ ಇದ್ದಾಗಲೆಲ್ಲಾ ಪ್ರಣೀತ್ ಹಾಗೂ ಅವರ ಪತ್ನಿಯ ಯೂನಿಯನ್ ಬ್ಯಾಂಕ್ ಖಾತೆಗಳಿಗೆ ಆರೋಪಿಗಳಿಂದ ಒಟ್ಟು 12,28,000 ರೂ. ಸಾಲ ಪಡೆಯಲಾಗಿತ್ತು. 

ಸಾಲಕ್ಕೆ ಭದ್ರತೆಯಾಗಿ ಆರೋಪಿ ಸಂಪದಾ ಮತ್ತು ಸುನೀಲ್ ಹೆಸರಿನಲ್ಲಿ ಕರಾರು ಪತ್ರಗಳನ್ನು ಬರೆಸಿಕೊಳ್ಳಲಾಗಿತ್ತು. ಜೊತೆಗೆ ಯೂನಿಯನ್ ಬ್ಯಾಂಕ್‌ನ ಮೂರು ಖಾಲಿ ಚೆಕ್‌ಗಳನ್ನು ಸಹಿ ಮಾಡಿಸಿಕೊಂಡು ಪಡೆಯಲಾಗಿತ್ತು. ತರುವಾಯ 2024ರ ಆಗಸ್ಟ್ 8 ರಿಂದ 2026ರ ಸೆಪ್ಟೆಂಬರ್ 1 ರವರೆಗೆ ಫಿರ್ಯಾದಿ ಪ್ರಣೀತ್ ಅವರು ಪೋನ್‌ಪೇ (PhonePe) ಹಾಗೂ ನಗದು ರೂಪದಲ್ಲಿ ಬರೋಬ್ಬರಿ 26,01,000 ರೂ.ಗಳನ್ನು ಆರೋಪಿಗಳಿಗೆ ಮರಳಿಸಿದ್ದಾರೆ.

ರಿವಾಲ್ವರ್, ರೌಡಿಗಳ ಹೆಸರು ಹೇಳಿ ಬೆದರಿಕೆ:

ಬ್ಯಾಂಕ್ ಬಡ್ಡಿ ದರಕ್ಕಿಂತ ಅತಿ ಹೆಚ್ಚಿನ ಮೊತ್ತ ಹಾಗೂ ಪಡೆದ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ನೀಡಿದ್ದರೂ, ಆರೋಪಿಗಳು ಕರಾರು ಪತ್ರ ರದ್ದುಪಡಿಸಲು ಮತ್ತು ಖಾಲಿ ಚೆಕ್‌ಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಹಣ ಮರಳಿಸಿದ ಬಳಿಕ ಚೆಕ್ ಕೇಳಲು ಹೋದಾಗ ಆರೋಪಿ ಸುನೀಲ್ ಕಲ್ಗುಟುಕರ್, ನಿನಗೆ ಯಾಕೆ ಚೆಕ್ ಮತ್ತು ಕರಾರು ಪತ್ರ ನೀಡಬೇಕು, ಇನ್ನು ಬಡ್ಡಿ ಹಣ ನೀಡದಿದ್ದರೆ ನನ್ನ ಸರ್ವಿಸ್ ರಿವಾಲ್ವರ್‌ನಿಂದ ಶೂಟ್ ಮಾಡುತ್ತೇನೆ ಎಂದು ಭೀಕರವಾಗಿ ಬೆದರಿಸಿದ್ದಾನೆ. ಮುಂಬೈನಿಂದ ರೌಡಿಗಳನ್ನು ಕರೆಸಿ ನಿನ್ನನ್ನು ಸಾಯಿಸುತ್ತೇನೆ ಮತ್ತು ಜೆಸಿಬಿ ತಂದು ನಿನ್ನ ಮನೆಯನ್ನು ಒಡೆದುಹಾಕುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಾನೆ.

ಅಷ್ಟೇ ಅಲ್ಲದೆ, ಪ್ರಣೀತ್ ಅವರ ಪತ್ನಿಗೂ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಲಾಗಿದೆ. ಭದ್ರತೆಗಾಗಿ ಪಡೆದಿದ್ದ ಖಾಲಿ ಚೆಕ್‌ವೊಂದಕ್ಕೆ 13,50,000 ರೂ. ನಮೂದಿಸಿ ಬ್ಯಾಂಕ್‌ಗೆ ಹಾಕಿ ಬೌನ್ಸ್ ಮಾಡಿಸಿರುವ ಆರೋಪಿಗಳು, ಇನ್ನೂ ಹಣ ಬರಬೇಕು, ನಿಮಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ದಿನೇ ದಿನೇ ಹೆಚ್ಚಾದ ಬಡ್ಡಿ ದಂಧೆಕೋರರ ಈ ಕಿರುಕುಳದಿಂದ ಬೇಸತ್ತ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ. ದೂರಿನ ಅನ್ವಯ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಬಿಎನ್‌ಎಸ್ (BNS-2023) ಕಲಂ 308(3), 351(2) ಸಹಿತ 3(5) ಹಾಗೂ ಕರ್ನಾಟಕ ವಿಪರೀತ ಬಡ್ಡಿ ವಿಧಿಸುವಿಕೆ ತಡೆ ಕಾಯ್ದೆ 2004ರ (The Karnataka Prevention Of Charging Exorbitant Interest Act 2004) ಕಲಂ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *