Spread the love

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ–2026ರ ಅಂಗವಾಗಿ ‘ಪ್ರಜಾಪ್ರಭುತ್ವದಲ್ಲಿ ಯುವ ಸಂಸತ್ತು’ ಕಾರ್ಯಕ್ರಮಕ್ಕೆ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ ಮಂಗಳವಾರ ಚಾಲನೆ ನೀಡಿದರು. 

12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಬಸವಣ್ಣನವರು ಪ್ರಜಾಪ್ರಭುತ್ವದ ಆಶಯಗಳಿಗೆ ಭದ್ರ ಬುನಾದಿ ಹಾಕಿದ್ದರು. ಅವರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳಿಂದ ಪ್ರೇರಣೆ ಪಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಿಂದಾಗಿ ಇಂದು ದೇಶದಲ್ಲಿ ಎಲ್ಲರೂ ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಬಣ್ಣಿಸಿದರು.

ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಬಸವಣ್ಣನವರು ಮಹತ್ವದ ಸಾಮಾಜಿಕ ಸಂದೇಶ ಸಾರಿದ್ದರು. ಅದೇ ಪ್ರೇರಣೆಯಿಂದ ಇಂದು ಮಹಿಳೆಯರು ಆಡಳಿತ ವ್ಯವಸ್ಥೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಮೂಲಕ ಅಧಿಕಾರ ಹಾಗೂ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಧಿಕಾರ ಎಲ್ಲರ ಕೈಯಲ್ಲಿದ್ದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ವಿವರಿಸಿದ ಸಚಿವರು, ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಸತೀಶ್ ಕೆ. ಸೈಲ್, ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದ್ದು, ಸಂವಿಧಾನದ ಆಶಯಗಳನ್ನು ಅನುಸರಿಸಿ ಆಡಳಿತ ನಡೆಸಬೇಕು ಎಂದರು. ಜನಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ಇಂತಹ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ಇದೇ ವೇಳೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ಪ್ರಜಾಪ್ರಭುತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಯುವ ಸಂವಾದ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜೊತೆಗೆ, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹೊಸ ನೋಂದಣಿ ಹಾಗೂ ತಿದ್ದುಪಡಿಗೆ ಸೆಪ್ಟೆಂಬರ್ 23 ರವರೆಗೆ ಅವಕಾಶವಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ನೆನಪಿಸಿದರು. 

ಕಾರ್ಯಕ್ರಮದಲ್ಲಿ ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನ ಪ್ರಾಚಾರ್ಯ ಡಾ. ಸಿದ್ದಲಿಂಗಸ್ವಾಮಿ ವಿ. ವಸ್ತ್ರದ ಅವರು ‘ಯುವ ಸಂಪತ್ತು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಗಣಪತಿ ಡಿ. ಉಳ್ವೇಕರ, ಜಿ.ಪಂ ಸಿಇಒ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *