ಕಾರವಾರ: ತಾಲೂಕಿನ ಅರಗಾ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಲಾರಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃ*ತಪಟ್ಟಿದ್ದಾರೆ.
ಮೃತರನ್ನು ಬಿಣಗಾ ಮೂಲದ ನಿವಾಸಿ ಹಾಗೂ ಬಜಾಜ್ ಫೈನಾನ್ಸ್ ಸಿಬ್ಬಂದಿಯಾಗಿರುವ 42 ವರ್ಷದ ಗಣಪತಿ ಗೌಡ ಎಂದು ಗುರುತಿಸಲಾಗಿದೆ. ಭಾನುವಾರ ಕಾರವಾರದ ಸಂತೆಗೆ ತೆರಳಲು ಬಿಣಗಾದಿಂದ ಸ್ಕೂಟಿಯಲ್ಲಿ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸ್ಕೂಟಿ ಮೇಲೆ ಹರಿದ ಲಾರಿ, ಹೊತ್ತಿಕೊಂಡ ಬೆಂಕಿ
ಗಣಪತಿ ಗೌಡ ಅವರು ಕಾರವಾರದ ಕಡೆಗೆ ಬರುತ್ತಿದ್ದಾಗ, ಕಾರವಾರದಿಂದ ಅಂಕೋಲಾ ಕಡೆಗೆ ವೇಗವಾಗಿ ತೆರಳುತ್ತಿದ್ದ ಲಾರಿಯೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಮೇಲೆ ಲಾರಿ ಹರಿದು ಹೋಗಿದ್ದು, ಪರಿಣಾಮವಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಭೀಕರ ದುರ್ಘಟನೆಯಲ್ಲಿ ಸವಾರನ ದೇಹವು ಗಂಭೀರವಾಗಿ ಜಖಂಗೊಂಡಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪರಾರಿಯಾದ ಚಾಲಕನಿಗಾಗಿ ಪೊಲೀಸರ ಶೋಧ
ಅಪಘಾತ ಸಂಭವಿಸಿದ ತಕ್ಷಣವೇ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೂಲಂಕುಷ ಪರಿಶೀಲನೆ ನಡೆಸಿದ್ದಾರೆ. ಕಾರವಾರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಪರಾರಿಯಾಗಿರುವ ಲಾರಿ ಹಾಗೂ ಅದರ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
