ಕಾರವಾರ: ನಗರದ ಹೆದ್ದಾರಿ ಫ್ಲೈ ಓವರ್ ಕೆಳಗಿನ ಸರ್ಕಾರಿ ಜಾಗದಲ್ಲಿ ಕಳೆದ ಸುಮಾರು 2 ವರ್ಷಗಳಿಂದ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಗಿಡಗಳ ನರ್ಸರಿ ಅಡ್ಡಾದ ಮೇಲೆ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ಬುಧವಾರ ದಿಢೀರ್ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಿರುವ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಯನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆದ್ದಾರಿ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ನಿರ್ಲಕ್ಷ್ಯವೇ ಈ ಅಕ್ರಮಕ್ಕೆ ಕಾರಣವಾಗಿದ್ದು, ಇದು ಅಧಿಕಾರಿಗಳ ನೇರ ಕರ್ತವ್ಯ ಲೋಪವಾಗಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ನರ್ಸರಿ ವ್ಯಾಪಾರಿಯನ್ನು ಉಪಲೋಕಾಯುಕ್ತರು ವಿಚಾರಣೆ ನಡೆಸಿದಾಗ, ಪ್ರತಿದಿನ 3000 ದಿಂದ 4000 ರೂಪಾಯಿಗಳಷ್ಟು ವ್ಯಾಪಾರ ನಡೆಯುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮುಂದುವರಿಸಲಾಗುತ್ತಿದ್ದರೂ, ಅಧಿಕಾರಿಗಳು ಕೇವಲ ನೋಟಿಸ್ ನೀಡುವುದು ಮತ್ತು ದಂಡ ವಸೂಲಿ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ.
ಕೇವಲ ದಂಡ ಹಾಕಿ ಸುಮ್ಮನಾಗುವುದರಿಂದ ಇಂತಹ ಅಕ್ರಮಗಳು ನಿಲ್ಲುವುದಿಲ್ಲ, ಬದಲಿಗೆ ಕ್ರಿಮಿನಲ್ ದೂರು ದಾಖಲಿಸಿ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡುವಂತಹ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅನಧಿಕೃತ ಕೃತ್ಯಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳು ಹಾಗೂ ಖಾಸಗಿ ಕನ್ಸಲ್ಟೆಂಟ್ಗಳ ಬೇಜವಾಬ್ದಾರಿ ನಡವಳಿಕೆಯನ್ನು ಕಟುವಾಗಿ ಪ್ರಶ್ನಿಸಿರುವ ಉಪಲೋಕಾಯುಕ್ತರು, ಈ ಕುರಿತು ತಕ್ಷಣವೇ ಲಿಖಿತ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ಕಾರಿ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿರುವ ಅವರು, ಅಧಿಕಾರಿಗಳ ಈ ನಿರ್ಲಕ್ಷ್ಯ ಮತ್ತು ಪ್ರಕರಣದ ಸಮಗ್ರ ವರದಿಯನ್ನು ನವದೆಹಲಿಯ ಲೋಕಪಾಲ್ ಗಮನಕ್ಕೆ ತರುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
