ಕುಮಟಾ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಕುಡ್ಲೆ ಬೀಚ್ನಲ್ಲಿ ಶನಿವಾರ ಬೆಳಗ್ಗೆ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಬೆಂಗಳೂರು ಮೂಲದ ಈರ್ವರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ (ಲೈಫ್ಗಾರ್ಡ್) ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬೆಂಗಳೂರಿನ ಹರಿಬಾಬು (30) ಹಾಗೂ ಶರವಾನ್ (30) ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು. ಮೂವರು ಸ್ನೇಹಿತರು ಶನಿವಾರ ಬೆಳಗ್ಗೆ ಕೂಡ್ಲೆ ಬೀಚ್ಗೆ ತೆರಳಿ ಸಮುದ್ರದಲ್ಲಿ ಈಜಾಡಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ಹರಿಬಾಬು ಹಾಗೂ ಶರವಾನ್, ಸಮುದ್ರದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ದಡಕ್ಕೆ ಬರಲಾಗದೆ ಮುಳುಗುವ ಸ್ಥಿತಿಗೆ ತಲುಪಿ, ಜೀವಭಯದಿಂದ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ಇದನ್ನು ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ ಹಾಗೂ ಜೆಟ್-ಸ್ಕೀ (Jet Ski) ಚಾಲಕ ಪ್ರಕಾಶ ಲಮಾಣಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಮುದ್ರಕ್ಕಿಳಿದು ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಗೆ ಜೀವರಕ್ಷಕ ಸಿಬ್ಬಂದಿ ನಾಗೇಂದ್ರ ಕೂರ್ಲೆ ಹಾಗೂ ‘ಪ್ರವಾಸಿ ಮಿತ್ರ’ ಸತೀಶ್ ನಾಯಕ್ ಅವರು ಸಹಕಾರ ನೀಡಿದ್ದಾರೆ.
ಇದರೊಂದಿಗೆ ಕೂಡ್ಲೆ ಬೀಚ್ನ ‘ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ (Mystic Adventure Water Sports) ಸಿಬ್ಬಂದಿಯೂ ಈ ಕಾರ್ಯದಲ್ಲಿ ನೆರವಾಗಿದ್ದು, ಸಿಬ್ಬಂದಿಯ ತ್ವರಿತ ಸ್ಪಂದನೆ ಹಾಗೂ ಸಮಯಪ್ರಜ್ಞೆಯಿಂದಾಗಿ ಇಬ್ಬರು ಯುವಕರ ಪ್ರಾಣ ಉಳಿದಿದೆ. ಪ್ರವಾಸಿಗರು ಸಮುದ್ರಕ್ಕಿಳಿಯುವಾಗ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮನವಿ ಮಾಡಿದ್ದಾರೆ.
