Spread the love

ಕಾರವಾರ: ಚೀನಾದಲ್ಲಿ ಇತ್ತೀಚೆಗೆ ನಡೆದ 23 ವರ್ಷದೊಳಗಿನ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ 5,000 ಮತ್ತು 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ದೇಶ ಹಾಗೂ ರಾಜ್ಯದ ಕೀರ್ತಿ ಹೆಚ್ಚಿಸಿರುವ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಕ್ರೀಡಾಪಟು ಶಿವಾಜಿ ಪರಶುರಾಮ ಮಾದಪ್ಪನ ಗೌಡ್ರು ಅವರ ಸಾಧನೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಪಟು ಶಿವಾಜಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವ ಮಟ್ಟದಲ್ಲಿ ಜಿಲ್ಲೆಯ ಗುರುತು 

ಹಳಿಯಾಳ ತಾಲೂಕಿನ ಸಣ್ಣ ಹಳ್ಳಿಯಿಂದ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಸಾಧನೆ ಮಾಡಿರುವುದು ಇಡೀ ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಶಿವಾಜಿ ಅವರು ಶಿಸ್ತು ಮತ್ತು ದಿನನಿತ್ಯದ ಕಠಿಣ ಪರಿಶ್ರಮದಿಂದ ಈ ಮೈಲಿಗಲ್ಲು ತಲುಪಿದ್ದಾರೆ. ಅವರ ಮುಂದಿನ ಕ್ರೀಡಾ ಪಯಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕ್ರೀಡಾಂಗಣದ ಅಭಿವೃದ್ಧಿಗೆ ಒತ್ತು 

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, “ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡಲು ಪೂರಕವಾದ ಪ್ರಾಕೃತಿಕ ವಾತಾವರಣವಿದೆ. ಕಾರವಾರದ ಜಿಲ್ಲಾ ಕ್ರೀಡಾಂಗಣವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು” ಎಂದರು.

ಒಲಿಂಪಿಕ್ಸ್ ಪದಕದತ್ತ ಶಿವಾಜಿ ಗುರಿ 

ಜಿಲ್ಲಾಡಳಿತದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ರೀಡಾಪಟು ಶಿವಾಜಿ, “ಉತ್ತರ ಕನ್ನಡ ಜಿಲ್ಲೆಯ ಮಕ್ಕಳಿಗೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಪ್ರತಿಭೆಯಿದೆ. ಅವರು ಸುಲಭವಾಗಿ ಅಭ್ಯಾಸ ನಡೆಸಲು ಕಾರವಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಬೇಕು. ಮುಂದಿನ ದಿನಗಳಲ್ಲಿ ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ಗುರಿ ಹೊಂದಿದ್ದು, ದೇಶಕ್ಕಾಗಿ ಮತ್ತಷ್ಟು ಸಾಧನೆ ಮಾಡುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಿವಾಜಿ ಅವರ ಆರಂಭಿಕ ಹಂತದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಕೋಚ್ ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು. ಕಾರವಾರದ ರೋಟರಿ ಸೀಸೈಡ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶಿವಾಜಿ ಅವರನ್ನು ಗೌರವಿಸಿ, ನಗದು ಬಹುಮಾನ ವಿತರಿಸಿದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *