ಕಾರವಾರ: ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಯಾವುದೇ ಡಿಜೆ ವ್ಯವಸ್ಥೆಗಳು, ಬೇಸ್ ಬೂಸ್ಟರ್‌ಗಳು, ಸಂಚಾರಿ (ಮೊಬೈಲ್) ಡಿಜೆ ವಾಹನಗಳು ಹಾಗೂ 75 ಡೆಸಿಬೆಲ್ ಮೀರಿದ ಶಬ್ದವರ್ಧಕ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಆದೇಶ ಹೊರಡಿಸಿದ್ದಾರೆ.
ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು 2000 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) 2023 ರ ಕಲಂ 163 ರ ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಲಾಗಿದೆ.
ವಸತಿ ಪ್ರದೇಶಗಳು, ಇಳಿಜಾರು ರಸ್ತೆಗಳು, ಟ್ರಾಫಿಕ್ ದಟ್ಟಣೆಯ ಜಾಗಗಳು ಮತ್ತು ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಡಿಜೆ ಧ್ವನಿವರ್ಧಕಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯಗಳು ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ‘ಸೈಲೆಂಟ್ ಝೋನ್’ಗಳಲ್ಲಿ ಯಾವುದೇ ರೀತಿಯ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿಲ್ಲ.
ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಡಿಜೆ ಅಥವಾ ಅತಿಯಾದ ಶಬ್ದ ಹೊರಹೊಮ್ಮಿಸುವ ಧ್ವನಿವರ್ಧಕ ಸಾಧನಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಉತ್ಸವ ಅಥವಾ ಶೋಭಾಯಾತ್ರೆಗಳ ಮೆರವಣಿಗೆಯನ್ನು ಆಯೋಜಿಸುವ ಸಂಘಟಕರು ಅತೀ ಅವಶ್ಯವಿದ್ದಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಷರತ್ತುಬದ್ಧ ಮಿತ ಶಬ್ದ ವ್ಯವಸ್ಥೆಗಳ ಬಳಕೆಗೆ ಸಂಬಂಧಿಸಿದಂತೆ ಶಬ್ದ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸುವುದಾಗಿ ಸಂಘಟಕರು ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು.
ಒಂದು ವೇಳೆ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಕಾರ್ಯಕ್ರಮದ ಆಯೋಜಕರನ್ನೇ ವೈಯಕ್ತಿಕವಾಗಿ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
