Spread the love

ಭಟ್ಕಳ: ತಾಲೂಕಿನ ಜಾಲಿಕೋಡಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪಾತಿದೋಣಿ ಮಗುಚಿ ಮೀನುಗಾರರೊಬ್ಬರು ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ. ಮೃ*ತ ದುರ್ದೈವಿಯನ್ನು ಜಾಲಿಕೋಡಿ ನಿವಾಸಿ ಮಂಜುನಾಥ ಬೇಟ್ಯಾ ಮೊಗೇರ (56) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಇವರು ಒಂಟಿಯಾಗಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ಅಲೆಗಳ ಭಾರಿ ರಭಸಕ್ಕೆ ಸಿಲುಕಿ ಪಾತಿದೋಣಿ ಏಕಾಏಕಿ ಮಗುಚಿ ಬಿದ್ದಿದೆ. ದೋಣಿ ಮಗುಚಿದ ಪರಿಣಾಮ ಮಂಜುನಾಥ್ ಅವರು ಸಮುದ್ರದ ನೀರಿಗೆ ಬಿದ್ದು ಕೊಚ್ಚಿಹೋಗಿದ್ದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ನಾಪತ್ತೆಯಾಗಿದ್ದ ಮೀನುಗಾರನಿಗಾಗಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ (CSP) ಸಿಬ್ಬಂದಿ ತಮ್ಮ ದೋಣಿಗಳ ಮೂಲಕ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಸಮುದ್ರದ ಅಬ್ಬರದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗಿತ್ತು. 

ಮಂಗಳವಾರ ತಡಸಂಜೆಯವರೆಗೂ ಹುಡುಕಾಟ ನಡೆಸಿದರೂ ಕಣ್ಮರೆಯಾಗಿದ್ದ ಮೀನುಗಾರನ ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಇಂದು(ಬುಧವಾರ) ಬೆಳಿಗ್ಗೆ ಭಟ್ಕಳದ ಮುಂಡಳ್ಳಿ ಬಳಿಯ ಸಮುದ್ರ ತೀರದಲ್ಲಿ ಮಂಜುನಾಥ್ ಅವರ ಮೃ*ತದೇಹ ಕೊಚ್ಚಿಕೊಂಡು ಬಂದು ಪತ್ತೆಯಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *