Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಬಕಾರಿ ಇಲಾಖೆ ಜಪ್ತುಪಡಿಸಿಕೊಂಡಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಒಟ್ಟು 11.265 ಕೆ.ಜಿ. ಒಣ ಗಾಂಜಾವನ್ನು ಮಂಗಳವಾರ ಅಂಕೋಲಾದಲ್ಲಿ ಅಧಿಕೃತವಾಗಿ ನಾಶಪಡಿಸಲಾಯಿತು.

ಜಿಲ್ಲೆಯ ಶಿರಸಿ ವಲಯ ವ್ಯಾಪ್ತಿಯ 4 ಪ್ರಕರಣಗಳು, ದಾಂಡೇಲಿ ವಲಯದ 1 ಹಾಗೂ ಕುಮಟಾ ವ್ಯಾಪ್ತಿಯ 1 ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಈ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ವಿವಿಧ ನ್ಯಾಯಾಲಯಗಳ ಆದೇಶದಂತೆ ಈ ಮಾದಕ ದ್ರವ್ಯವನ್ನು ವಿಲೇವಾರಿ ಮಾಡಬೇಕಾಗಿದ್ದರಿಂದ, ಅಬಕಾರಿ ಇಲಾಖೆಯು ‘ಡ್ರಗ್ ಡಿಸ್ಪೋಸಲ್ ಕಮಿಟಿ’ಯ ಮೂಲಕ ಈ ಪ್ರಕ್ರಿಯೆ ನಡೆಸಿದೆ.

ಅಂಕೋಲಾದಲ್ಲಿರುವ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಇನ್ಸಿರನೇಟರ್‌ನಲ್ಲಿ ಗಾಂಜಾವನ್ನು ಬೆಂಕಿಯಲ್ಲಿ ಸುಡುವ ಮೂಲಕ ನಾಶಪಡಿಸಲಾಯಿತು. ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹಾಗೂ ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಎ.ಎಲ್.ನಾಗೇಶ, ಕಾರವಾರ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ., ಹಾಗೂ ಉಡುಪಿ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಅವರ ನೇರ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆದಿದೆ.

ಈ ಸಂದರ್ಭದಲ್ಲಿ ಕಾರವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಫೀಲ್ಡ್ ಆಫೀಸರ್ ಪ್ರಥಮೇಶ ಮೇತ್ರಿ, ಅಬಕಾರಿ ಇಲಾಖೆಯ ಸಂಬಂಧಪಟ್ಟ ತನಿಖಾಧಿಕಾರಿಗಳು ಹಾಗೂ ಅಂಕೋಲಾದ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು ಹಾಜರಿದ್ದರು. ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಜಪ್ತಿಯಾದ ಅಮಲು ಪದಾರ್ಥಗಳನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *